ಫಿಂಚ್  - 
ಏವೀಸ್ ವರ್ಗದ (ಪಕ್ಷಿಸಂಕುಲ) ಪ್ಯಾಸೆರಿಫಾರ್ಮೀಸ್ ಗಣದ ಫಿಂಜಿಲಿಡೀ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ಹಾಡುಹಕ್ಕಿಗಳಿರುವ ಸಾಮಾನ್ಯ ಹೆಸರು. ಈ ಕುಟುಂಬಕ್ಕೆ ಚಾಫಿಂಚ್, ಗ್ರಾಸ್‍ಬೀಕ್, ಬಂಟಿಂಗ್, ಲಿನ್ನೆಟ್, ಗೋಲ್ಟ್‍ಫಿಂಚ್, ಲಾಂಗ್‍ಸ್ಪರ್, ಬ್ರ್ಯಾಂಬ್ಲಿಂಗ್, ಹ್ವೈಟ್‍ತ್ರೋಟೆಡ್ ಸ್ಪ್ಯಾರೊ, ಕಾರ್ಡಿನಲ್ ಇತ್ಯಾದಿ ಹಲವಾರು ಹೆಸರಿನ ಹಕ್ಕಿಗಳು ಸೇರಿದ್ದು ಇವೆಲಕ್ಕೂ ವಿಶಾಲಾರ್ಥದಲ್ಲಿ ಫಿಂಚ್ ಎಂಬ ಹೆಸರನ್ನೇ ಕೆಲವೊಮ್ಮೆ ಬಳಸಲಾಗುತ್ತದೆ. ಆದರೂ ನಿರ್ದಿಷ್ಟವಾಗಿ ಈ ಕುಟುಂಬದ ಜಿಯೊಸ್ಟೈಜಿನೀ ಉಪಕುಟುಂಬಕ್ಕೆ ಸೇರಿದ ಡಾರ್ವಿನ್ ಫಿಂಚ್ ಅಥವಾ ಗಲಾಪರಸ್ ಫಿಂಚ್ ಹಕ್ಕಿಗಳಿಗೆ ಈ ಹೆಸರು ಹೆಚ್ಚು ಯುಕ್ತವಾಗಿದೆಯೆನ್ನಬಹುದು. ಗುಬ್ಬಚ್ಚಿ, ಗೀಜಗ, ಕ್ವೆಲಿಯ, ಬುಲ್ ಫಿಂಚ್, ಸಿಸ್ಕಿನ್ ಮುಂತಾದವು ಇವುಗಳ ಹತ್ತಿರ ಸಂಬಂಧಿಗಳು.

	ಫಿಂಚ್ ಹಕ್ಕಿಗಳಲ್ಲಿ ಒಟ್ಟು 315 ಪ್ರಭೇದಗಳಿವೆ. ಎಲ್ಲವೂ ನೂತನಲೋಕದ (ನ್ಯೂವಲ್ರ್ಡ್) ನಿವಾಸಿಗಳು. ಹುಲ್ಲು ಮುಂತಾದ ಸಸ್ಯಗಳ ಬೀಜಗಳೇ ಇವುಗಳ ಪ್ರಧಾನ ಆಹಾರವಾದ್ದರಿಂದ ಇವನ್ನು ಬೀಜಭಕ್ಷಿಗಳೆಂದು (ಸೀಡ್ ಈಟರ್ಸ್) ಕರೆಯಲಾಗುತ್ತದೆ. ಇವೆಲ್ಲವೂ ಸಣ್ಣಗಾತ್ರದ ಹಕ್ಕಿಗಳು; ಇವುಗಳ ಸರಾಸರಿ ಉದ್ದ 12 ಸೆಂಮೀ ಬೀಜಗಳನ್ನು ತಿನ್ನಲು ಸಹಾಯವಾಗುವಂತೆ ಇವುಗಳ ಕೊಕ್ಕು ಮೋಟಾಗಿಯೂ ಅಗಲವಾಗಿಯೂ ಇದೆ. ಇವು ಸಾಮಾನ್ಯವಾಗಿ ನೆಲದ ಮೇಲೆ ಕುಳಿತು ಇಲ್ಲವೆ ನೆಲಕ್ಕೆ ಆದಷ್ಟು ಹತ್ತಿರದ ಮಟ್ಟದಲ್ಲಿ ಕುಳಿತು ಆಹಾರವನ್ನು ಸೇವಿಸುವುವು. ಇವು ಹಾಡುಹಕ್ಕಿಗಳು; ಸಾಧಾರಣವಾಗಿ ಮರಗಿಡಗಳ ರೆಂಬೆಗಳ ಮೇಲೆ ಕುಳಿತು ಇಂಪಾಗಿ ಸ್ವನಗೈಯುವುವು. ಇವುಗಳ ಮೈಯಲ್ಲಿ 9 ಪ್ರಾಥಮಿಕ ಪುಕ್ಕಗಳಿವೆ (ಪ್ರೈಮರಿ ಫೆದರ್ಸ್). ಫಿಂಚ್‍ಗಳು ಸಾಮಾನ್ಯವಾಗಿ ಒಂಟೊಂಟಿಯಾಗಿ ಗೂಡುಕಟ್ಟುವುವು. ಗೂಡುಗಳು ಬಟ್ಟಲಿನಾಕಾರದಲ್ಲಿ ಇರುತ್ತವೆ. 
(ಕೆ.ಪಿ.ಆರ್)

	ಜಿಯೊಸ್ಟೈಜಿನೀ ಉಪಕುಟುಂಬದ ಫಿಂಚ್ ಹಕ್ಕಿಗಳಿಗೆ ಡಾರ್ವಿನ್ ಫಿಂಚ್‍ಗಳು ಅಥವಾ ಗಲಾಪಗಸ್ ಫಿಂಚ್‍ಗಳು ಎಂಬ ಹೆಸರು ಬಂದುದಕ್ಕೆ ಕಾರಣ 1835ರಲ್ಲಿ ಚಾಲ್ರ್ಸ್ ಡಾರ್ವಿನ್ ಬೀಗಲ್ ಹಡಗಿನಲ್ಲಿ ಯಾನ ಮಾಡಿ ಎಕ್ವಡಾರಿಗೆ 960 ಕಿಮೀ. ಪಶ್ಚಿಮಕ್ಕಿರುವ ಗಲಾಪಗಸ್ ದ್ವೀಪಗಳಿಗೆ ಬಂದಿದ್ದಾಗ ಇವನ್ನು ಪ್ರಥಮಬಾರಿಗೆ ಕಂಡುಹಿಡಿದದ್ದು. ಆದ ಇವುಗಳ ಬಾಹ್ಯರೂಪ, ಸ್ವಭಾವ, ಆಹಾರ ಸೇವೆನೆಯ ಕ್ರಮ ಮುಂತಾದವನ್ನು ಅಧ್ಯಯಿಸಿದ. ಇವು ಸ್ಥೂಲವಾಗಿ ಪರಸ್ಪರ ಸಮಾನವಾಗಿದ್ದು ತಮ್ಮತಮ್ಮೊಳಗಿನ ಸಂಬಂಧವನ್ನು ವ್ಯಕ್ತಪಡಿಸುವುವಾದರೂ ಪ್ರತಿಯೊಂದು ಪ್ರಭೇದವೂ ವಿಭಿನ್ನವಾಗಿದ್ದು ಡಾರ್ವಿನ್ನನ ವಿಕಾಸವಾದಕ್ಕೆ ಸಾಕಷ್ಟು ಪುರಾವೆ ಒದಗಿಸಿದವು.

	ಇವುಗಳಲ್ಲಿ 4 ಜಾತಿಗಳೂ 14 ಪ್ರಭೇಧಗಳೂ ಉಂಟು. ಪ್ಲಿಯೊಸೀನ್ ಕಾಲದಲ್ಲಿ (5-10ಮಿಲಿಯನ್ ವರ್ಷಗಳ ಹಿಂದೆ) ಅಮೆರಿಕದ ವಲಸೆ ಬಂದ ಒಂದೇ ಒಂದು ಫಿಂಚ್ ಪೂರ್ವಜಪಕ್ಷಿಪ್ರಭೇದದಿಂದ ಇವು ವಿಕಾಸ ಗೊಂಡಿವೆ ಎಂದು ನಂಬಲಾಗಿದೆ. ವಿಕಸಾತ್ಮಕ ಪರಿಹೊಂದಾಣಿಕಾ ಅಭಿವರ್ಧನೆಗೆ (ಅಡ್ಯಾಪ್ಟಿವ್ ರೇಡಿಯೇಷನ್)-ಅಂದರೆ ಯಾವುದೇ ಒಂದು ಪಿತೃತಳಿಯಿಂದ ಉಗಮಿಸುವ ಸಂತತಿಜೀವಿಗಳು ತಮ್ಮ ಪರಿಸರದ ವಿಭಿನ್ನ ಸನ್ನಿವೇಶಗಳಿಗೆ ತಕ್ಕಂತೆ ಹೊಂದಿಕೊಂಡು ಬೇರೆ ಬೇರೆ ದಿಕ್ಕುಗಳಲ್ಲಿ ವಿಕಿರಣಗೊಳ್ಳುವಂತೆ ವಿಕಾಸಾತ್ಮಕವಾಗಿ ಅಭಿವರ್ಧಿಸುವುದು-ಡಾರ್ವಿನ್ ಫಿಂಚ್ ಹಕ್ಕಿಗಳು ಬಲು ಸೊಗಸಾದ, ಸ್ಪಷ್ಟವಾದ ಹಾಗೂ ನಿಖರವಾದ ಉದಾಹರಣೆಗಳೆನಿಸಿವೆ. 

	ಇವುಗಳ ಸರಾಸರಿ ಗಾತ್ರ 10-20 ಸೆಂಮೀ. ಕೆಲವು ಪ್ರಭೇದಗಳಲ್ಲಿ ಗಂಡು ಕಪ್ಪು ಬಣ್ಣದವೂ ಹೆಣ್ಣು ಬೂದಿಮಿಶ್ರಿತ ಕಂದು ಬಣ್ಣದವೂ ಆಗಿವೆಯಾದರೆ ಬಹುತೇಕ ಪ್ರಭೇದಗಳಲ್ಲಿ ಹೆಣ್ಣು ಗಂಡು ಎರಡೂ ಒಂದೇ ತೆರ. ಇವುಗಳ ಕೊಕ್ಕುಗಳ ಆಕಾರ, ರಚನೆಯಲ್ಲಿ ಅಪಾರ ವೈವಿಧ್ಯ ಉಂಟು. ಕೆಲವು ಪ್ರಭೇದಗಳು ಬೀಜಭಕ್ಷಿಗಳಾಗಿದ್ದು ಮೋಟಾದ ಮತ್ತು ದೃಢವಾದ ಕೊಕ್ಕನ್ನು ಪಡೆದಿವೆಯಾದರೆ, ಇನ್ನು ಕೆಲವು ಕೀಟಭಕ್ಷಿಗಳು, ಇವುಗಳ ಕೊಕ್ಕು ತೆಳು ಬಗೆಯದು. ಮತ್ತೆ ಕೆಲವಲ್ಲಿ ಕೊಕ್ಕು ಬಾಗಿದಂತಿದೆ ಹಾಗೂ ಇವುಗಳ ನಾಲಿಗೆ ಸೀಳಿಕೊಂಡಿದೆ; ಇಂಥ ಪ್ರಭೇದಗಳು ಪಾಪಾಸುಕಳ್ಳಿಯ ಹೂಗಳನ್ನು ಕೆದಕಿ ಒಳಗಿನ ಮಕರಂದವನ್ನು ಹೀರುವುವು. ಅಂತೆಯೇ ಮೊಗ್ಗು, ಎಲೆ, ಹಣ್ಣುಗಳನ್ನು ತಿನ್ನುವಂಥ ಪ್ರಭೇದಗಳೂ ಉಂಟು. ಇಂಥವುಗಳ ಕೊಕ್ಕು ಚಿಕ್ಕದಾಗಿಯೂ ಬಲವಾಗಿಯೂ ಕೊಂಚ ಬಾಗಿದಂತೆಯೂ ಇದೆ. ಮರಕುಟಿಕದರಂತೆಯೇ ಬಲವಾಗಿಯೂ ನೀಳವಾಗಿಯೂ ಇದೆ. ಮರಗಿಡಗಳ ತೊಗಟೆಗಳಲ್ಲಿಯೂ ಪೊಟರೆಗಳನ್ನು ಚಾಣದಂತೆ ಬಡಿದು ಒಳಗಿರುವ ಕೀಟಗಳನ್ನು ಹೆಕ್ಕಿತೆಗೆಯಲು ತಕ್ಕುವಾದ ಕೊಕ್ಕು ಇದು. ಆದರೆ ಮರಕುಟಿಗಗಳಲ್ಲಿರುವಂಥ ಉದ್ದನಾಲಿಗೆ ಈ ಫಿಂಚ್ ಹಕ್ಕಿಗಿಲ್ಲವಾದ್ದರಿಂದ ಹುಳುಗಳನ್ನು ಸೆಳೆದುಕೊಳ್ಳಲು ಈ ಹಕ್ಕಿ ಅಸಾಮಾನ್ಯ ವಿಧಾನವನ್ನು ಅನುಸರಿಸುತ್ತದೆ. ಸಣ್ಣ ಕಡ್ಡಿಯನ್ನೋ ಪಾಪಾಸುಕಳ್ಳಿಯ ಮುಳ್ಳನ್ನೋ ಎತ್ತಿಕೊಂಡು ಪೊಟರೆಯೊಳಗೆ ಚುಚ್ಚಿ ಹುಳು ಆಚೆ ಬರುವಂಥೆ ಮಾಡಿ ಅನಂತರ ಕಡ್ಡಿಯನ್ನೆಸೆದು ಹುಳುವನ್ನು ಹಿಡಿದು ನುಂಗುತ್ತದೆ. ಹೀಗೆ ಉಪಕರಣವನ್ನು ಬಳಸುವ ವಿಶೇಷ ಸಾಮಥ್ರ್ಯ ಇದಕ್ಕಿದೆ.

	ಕೊಕ್ಕುಗಳಲ್ಲಿ ಅಪಾರ ವ್ಯತ್ಯಾಸವಿದೆಯಾದರೂ ಎಲ್ಲ ಡಾರ್ವಿನ್ ಫಿಂಚ್ ಹಕ್ಕಿಗಳ ಒಳ ಅಂಗರಚನೆ ಹಾಗೂ ಗೂಡು ನಿರ್ಮಾಣ ವಿಧಾನ ಒಂದೇ ತೆರನಾಗಿವೆ. ಎಲ್ಲವೂ ತಮ್ಮ ಕ್ಷೇತ್ರಗಳನ್ನು ರೂಪಿಸಿಕೊಳ್ಳುವುವಲ್ಲದೆ, ಗಂಡು ಹಕ್ಕಿಗಳು ಅಂಥ ಇಂಪೇನೂ ಅಲ್ಲದೆ ಹಾಡಿನಿಂದ ಹೆಣ್ಣುಗಳನ್ನು ಆಕರ್ಷಿಸಿ ಗೂಡು ನಿರ್ಮಾಣದಲ್ಲಿ ತೊಡಗುವುವು. ಪಾಪಾಸುಕಳ್ಳಿಗಳ ಇಲ್ಲವೆ ಇತರ ಮರಗಿಡಗಳ ರೆಂಬೆಗಳಲ್ಲಿ ನೆಲದಿಂದ 1-10ಮೀ ಎತ್ತರದಲ್ಲಿ ಮುಚ್ಚಿದ ಗೂಡುಗಳನ್ನು ಕಟ್ಡಿ ಸುಮಾರು 4 ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು ಬಿಳಿ ಬಣ್ಣದವಾಗಿದ್ದು ನಸುಕೆಂಪು ಚುಕ್ಕೆಗಳಿಂದ ಅಲಂಕೃತವಾಗಿವೆ. ಕಾವು ಕೊಡುವ ಕೆಲಸ ಹೆಣ್ಣಿನದು. 12 ದಿವಸಗಳ ತರುವಾಯ ಮೊಟ್ಟಿಯೊಡೆಯುವುದು, ಕಾವೂಕೂತ ಹೆಣ್ಣಿಗೆ ಗಂಡು ಆಹಾರವನ್ನೊದಗಿಸುತ್ತದೆ. ಎರಡು ವಾರಗಳ ಅನಂತರ ಮರಿಗಳು ದೊಡ್ಡದಾಗಿ ಸ್ವಾವಲಂಬಿಗಳಾಗುವುವು.